ಇನ್ನು ದಯಬಾರದೆ ದಾಸನ ಮೇಲೆ ||೨||
ಪನ್ನಗ ಶಯನ ಹರೇ ರಂಗಾ
||ಇನ್ನು||
ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನಾ ಯೋನಿಗಳಲ್ಲಿ ಅಳಿದು ಪುಟ್ಟಿ
||ನಾನಾ ದೇಶ||
ನಾನು ನನ್ನದು ಎಂಬ ನರಕದೊಳಗೆ ಬಿದ್ದು ||೨||
ನೀನೇ ಗತಿಯೆಂದು ನಂಬಿದ ದಾಸನ ಮೇಲೆ
||ಇನ್ನು ||
ಕಾಮಾದಿ ಷಡ್ವರ್ಗ ಗಾಢಾಂಧಕಾರದಿ
ಪಾಮರನಾಗಿದ್ದ ಪಾತಕನೂ
||ಕಾಮಾದಿ||
ಶ್ರೀ ಮನೋಹರನೆ ಚಿತ್ತಜ ಜನಕನೆ ||೨||
ನಾಮ ಮುದ್ರಿಕೆಯಿಂದ ನಂಬಿದ ದಾಸನ ಮೇಲೆ
||ಇನ್ನು ||
ಮಾನಸ ವಾಚ ಕಾಯದಿ ಮಾಳ್ಪ ಕರ್ಮವು
ದಾನವಾಂತಕ ನಿನ್ನ ಅಧೀನವಲ್ಲವೆ
||ಮಾನಸ||
ಏನು ಮಾಡಿದರೇನು ಪ್ರಾಣ ನಿನ್ನದು ದೇವಾ||೨||
ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ
||ಇನ್ನು ||