ಮನಸ್ಸು ಬಂದಾಗ ತಡಮಾಡದೆ ಮಾಡಿಬಿಡಬೇಕು

ಶುಭಸ್ಯ ಶೀಘ್ರಂ:

ಯಾವುದೇ ಒಳ್ಳೆಯ ಕೆಲಸವನ್ನು ಮಾಡುವಾಗ ಹೆಚ್ಚು ಯೋಚಿಸದೆ ಮನಸ್ಸಿಗೆ ಬಂದ ಕೂಡಲೇ ಮಾಡಬೇಕು. ತಡಮಾಡಿದರೆ ಮನಸ್ಸು ಬದಲಾಗಬಹುದು. ಇದಕ್ಕೊಂದು ಉದಾಹರಣೆ, ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೊರಡುವ ದಿನ, ದುಃಖತಪ್ತ ನಾಗಿದ್ದ ರಾಮನ ತಂದೆ ದಶರಥ ಮಹಾರಾಜ ರಾಮನನ್ನು ಕರೆದು, ‌”ರಾಮ, ನೀನು ವನವಾಸಕ್ಕೆ14 ವರ್ಷ ಹೋಗಬೇಡ, ಅಂತ ನಾನು ನಿನ್ನನ್ನು ತಡೆಯುವುದಿಲ್ಲ, ಆದರೆ ಇವತ್ತು ಒಂದು ರಾತ್ರಿ ಇಲ್ಲಿ ಉಳಿದು ನಾಳೆ ಹೊರಡು. ನಾನು ನಿನ್ನ ಜೊತೆ ಬಹಳಷ್ಟು ಮಾತನಾಡುವುದು ಇದೆ” ಎಂದು ಅಂಗಲಾಚಿ ಅಳುತ್ತಾ ದಶರಥ ಕೇಳಿಕೊಂಡ.

ರಾಮನು ಬೇರೆಯವರಂತೆ ಯೋಚಿಸುವುದೇ ಆಗಿದ್ದರೆ, ಹೇಗೂ ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕು, ಈ ದಿನ ಒಂದು ರಾತ್ರಿ ತಂದೆ ಜೊತೆ ಕಳೆದರೆ ಏನಾಗುತ್ತದೆ. ತಂದೆಯೇ ವನವಾಸಕ್ಕೆ ಹೋಗು ಎಂದಿದ್ದು, ಅದು ಒಂದು ರಾತ್ರಿ ಉಳಿಯಲು, ಹೇಳುತ್ತಿರುವುದು ಹೆತ್ತ ಅಪ್ಪನೇ, ಹೀಗಿರುವಾಗ ಇದರಲ್ಲಿ ತಪ್ಪೇನು? ಅಂತ ಅಂದುಕೊಳ್ಳುತ್ತಿದ್ದನು. ಆದರೆ, ಹಾಗೆ ಯೋಚಿಸದೆ, ರಾಮನು ನಾನು ಈಗಲೇ ಹೋಗಬೇಕು ಎಂದನು. ಇಷ್ಟು ಅವಸರ ಏಕೆಂದು ದಶರಥನ ಕೇಳಲು, ರಾಮನು, ಒಳ್ಳೆ ಕೆಲಸಕ್ಕೆ ನೂರೆಂಟು ವಿಘ್ನಗಳು ಬರುತ್ತವೆ. ನನ್ನ ಮನಸ್ಸು ಬದಲಾಗಬಹುದು, ಬೇರೆ ಯಾರಾದರೂ ಹೇಳಬಹುದು, ಇದಕ್ಕೆ ಬದಲಿ ವ್ಯವಸ್ಥೆ ಇದೆ ಎನ್ನಬಹುದು, ಅದರಲ್ಲಿ ಸುಲಭವಾದ ಮಾರ್ಗ ನನಗೂ ಒಪ್ಪಿಗೆ ಆಗಬಹುದು, ಅಥವಾ ನನ್ನ ಮನಸ್ಸು ಬದಲಾಗಿ ಯಾವುದೋ ಶಕ್ತಿ ನನ್ನ ನ್ನು ನಿಲ್ಲಿಸಬಹುದು. ಒಂದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನು ಬೇಕಾದರೂ ಆಗಬಹುದು. ಈಗ ನನ್ನ ಮನಸ್ಸು ಪಕ್ವವಾಗಿದೆ ಆದುದರಿಂದ ಈಗಲೇ ಹೊರಡಬೇಕು ಎಂದನು.

ಇದೇ ರೀತಿ ಧರ್ಮಕಾರ್ಯ ಮಾಡುವಾಗಲೂ, ಧರ್ಮ ಮಾಡಬೇಕು. ಮನಸ್ಸು ಬಂದಾಗ ತಡಮಾಡದೆ ಮಾಡಿಬಿಡಬೇಕು,ಇದನ್ನೆ ದಕ್ಷತೆ ಎನ್ನುವುದು.ಇದಕ್ಕೊಂದು ಮಹಾಭಾರತದ ಉಪಕಥೆ ಇದೆ. ಒಂದು ಸಾರಿ ಅರ್ಜುನ, ತುಂಬಾ ಹೆಮ್ಮೆಯಿಂದ, ನಮ್ಮ ಅಣ್ಣ ಧರ್ಮರಾಯ ಬಹಳ ಧರ್ಮಿಷ್ಠ, ಧರ್ಮ ಮಾಡುವುದರಲ್ಲಿ ಅವನಿಗೆ ಸಮ ಯಾರೂ ಇಲ್ಲ, ಅವನಂಥ ದಾನಿಗಳು ಎಲ್ಲೂ ಇಲ್ಲ. ಹೆಸರಿಗೆ ತಕ್ಕ ಹಾಗೆ ಅವನು ಧರ್ಮಿಷ್ಠ ಎಂದು ಕೃಷ್ಣನಿಗೆ ಹೇಳುತ್ತಾ, ಕೃಷ್ಣ ನಾನು ಹೇಳಿದ್ದು ಸರಿ ಇದೆ ಅಲ್ವಾ? ಎಂದು ಕೇಳಿದಾಗ, ಕೃಷ್ಣನು ನಗುತ್ತಿದ್ದ, ಯಾಕೋ ಕೃಷ್ಣ ನಿನಗೆ ಇದರಲ್ಲಿ ಅನುಮಾನವೆ?
ಎಂದು ಅರ್ಜುನ ಕೇಳಿದಾಗ, ಹೋಗ್ಲಿ ಬಿಡಪ್ಪ, ಯಾಕೆ ತಕರಾರು ಒಂದು ಪರೀಕ್ಷೆ ಮಾಡಿಬಿಡೋಣ ಬಾ ಎಂದು ಅರ್ಜುನನಿಗೆ ಹೇಳಿದ.

ಮರುದಿನ ಕೃಷ್ಣ ಬ್ರಾಹ್ಮಣನ ವೇಷದಲ್ಲಿ ಧರ್ಮರಾಯನ ಮನೆಗೆ ಹೋಗುತ್ತಾನೆ. ಧರ್ಮರಾಜ ನೀನು ತುಂಬಾ ಧರ್ಮಿಷ್ಠ, ನಿನ್ನಂತಹ ದಾನಿಗಳು ಎಲ್ಲೂ ಇಲ್ಲ, ಧರ್ಮದಲ್ಲಿ ನಿನ್ನ ಹಾಗೆ ಯಾರು ಇಲ್ಲ ಎಂದು ಬಹಳಷ್ಟು ಜನ
ಮಾತನಾಡುವುದನ್ನು ಕೇಳಿದ್ದೇನೆ. ಈಗ ನಿನ್ನಿಂದ ನನಗೆ ಒಂದು ಸಹಾಯ ಆಗಬೇಕು. ನಾನು ನನ್ನ ಮಗನ ‘ಉಪನಯನ’ ಇಟ್ಟುಕೊಂಡಿದ್ದೇನೆ. ಉಪನಯನದ ಹೋಮಕ್ಕೆ ‘ಶ್ರೀಗಂಧದ’ ಚಕ್ಕೆಗಳು ಬೇಕು. ಆದರೆ ಈಗ ಮಳೆಗಾಲ, ಎಲ್ಲಿ ಹುಡುಕಿದರೂ ಒಂದು ತುಂಡು ಗಂಧದ ಚೆಕ್ಕೆ ಸಿಗಲಿಲ್ಲ. ರಾಜ ಭಂಡಾರದಲ್ಲಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಣೆ ಮಾಡಿರುತ್ತೀರಿ. ಅದರಲ್ಲಿ ನನಗೂ ಸ್ವಲ್ಪ ಗಂಧದ ಚಕ್ಕೆ ಕೊಡುತ್ತೀಯಾ? ಎಂದು ಕೇಳಿದನು.
ಧರ್ಮರಾಯನು, ಖಂಡಿತ ಕೊಡುತ್ತೇನೆ. ಸೇವಕರ ಹತ್ತಿರ ಗಂಧದ ಚೆಕ್ಕೆ ತರಿಸಿಕೊಡಿ ಎಂದು ಮಂತ್ರಿಗಳಿಗೆ ಹೇಳಿದನು. ತರಲು ಕಳಿಸಿದ ಸೇವಕರು ಹಾಗೆ ಬಂದು, ಪ್ರಭು ಉಗ್ರಾಣದಲ್ಲಿರುವ ಗಂಧದ ತುಂಡುಗಳು ಮಳೆಯಿಂದ ನೆಂದುಹೋಗಿದೆ ಎಂದು ಹೇಳಿದರು.

ಧರ್ಮರಾಯನು ಬ್ರಾಹ್ಮಣನ ಕಡೆ ತಿರುಗಿ, ವಿಪ್ರರೇ, ಮಳೆಯಿಂದಾಗಿ ಗಂಧದ ತುಂಡುಗಳು ಅರಮನೆಯಲ್ಲೂ ನೆಂದು ಹೋಗಿದೆ. ಆದ್ದರಿಂದ ದಯವಿಟ್ಟು ನಾಲ್ಕು ದಿನ ಬಿಟ್ಟು ಬನ್ನಿ, ಗಂಧದ ಚಕ್ಕೆಗಳನ್ನು ಒಣಗಿಸಿ ಕೊಡಿಸುವೆ ಎಂದನು.
ಬ್ರಾಹ್ಮಣನು ಆಯಿತು ಎಂದು ಕರ್ಣನ ಮನೆಗೆ ಹೋಗುತ್ತಾನೆ. ಅಲ್ಲಿ ಕೇಳಿದಂತೆ ಕರ್ಣನಿಗೆ, ಅಂಗರಾಜ ನನ್ನ ಮಗನ ಉಪನಯನ ಇಟ್ಟು ಕೊಂಡಿದ್ದೇನೆ ಹೋಮಕ್ಕೆ ಗಂಧದ ಚಕ್ಕೆಗಳು ಸಿಗುತ್ತಿಲ್ಲ ಮಳೆಯಿಂದ ಎಲ್ಲಾ ಚಕ್ಕೆಗಳು ನೆಂದು ಹೋಗಿದೆ. ಅರಮನೆಯ ಗಂಧದ ತುಂಡುಗಳನ್ನು ಕೊಡುತ್ತೀರಾ? ಎಂದು ಕರ್ಣನನ್ನು ಕೇಳಿದನು. ತಕ್ಷಣ ಕರ್ಣನು ಸೇವಕರನ್ನು ಕಳುಹಿಸಿ ತರಲು ಹೇಳಿದ. ಇಲ್ಲಿಯೂ ಸಹ ಅದೇ ರೀತಿ ಸೇವಕರು ಬಂದು ಮಳೆಯಿಂದ ಗಂಧದ ಚಕ್ಕೆಗಳು ಒದ್ದೆ ಆಗಿವೆ ಎಂದು ಹೇಳಿದಾಗ, ಬ್ರಾಹ್ಮಣನ ವೇಷದಲ್ಲಿದ್ದ ಕೃಷ್ಣನು, ಸರಿ ಹಾಗಾದರೆ ನಾನು ಇನ್ನು ನಾಲ್ಕು ದಿನ ಬಿಟ್ಟು ಬರುತ್ತೇನೆ ಎಂದು ಹೊರಡುವುದರಲ್ಲಿ ಇದ್ದನು. ಆಗ ಕರ್ಣನು, ವಿಪ್ರೋತ್ತಮರೆ, ಸ್ವಲ್ಪ ತಡೆಯಿರಿ ಅವಸರ ಮಾಡಬೇಡಿರಿ. ನಾನು ನಿಮಗೆ ಎಷ್ಟು ಗಂಧದ ಚೆಕ್ಕೆ ಬೇಕೋ, ಅಷ್ಟು ಚಕ್ಕೆಯನ್ನು ಕೊಡುತ್ತೇನೆ ಎಂದು ತನ್ನ ಮನೆಯಲ್ಲಿದ್ದ ದೇವರ ಕೋಣೆಗೆ ಹೋದನು. ಕರ್ಣನ ಮನೆಯ ದೇವರ ಕೋಣೆಯ, ಬಾಗಿಲು ಅದರ ಚೌಕಟ್ಟು, ಕಿಟಕಿಗಳು ಅದರ ಚೌಕಟ್ಟು, ಸುತ್ತಲೂ ಇರುವ ತಳಿಗಳು ಎಲ್ಲವೂ ಶ್ರೀಗಂಧದಿಂದ ಕೂಡಿದ್ದವು. ಕೆತ್ತನೆ ಮಾಡಿದ ಬಾಗಿಲಿಗೆ ಮುತ್ತು ,ಹವಳ ,ರತ್ನಗಳನ್ನು ಜೋಡಿಸಲಾಗಿತ್ತು. ಬಹು ಸುಂದರವಾದ ವಿನ್ಯಾಸದಿಂದ ಕೂಡಿತ್ತು. ಅಲ್ಲಿಗೆ ಬಂದ ಕರ್ಣನು ಬಾಗಿಲ ಬಳಿ ನಿಂತು ಏನೊಂದು ಯೋಚಿಸದೆ, ಮೀಟಿ, ಹಾರಿ, ಕೈಯಿಂದ ಗುದ್ದಿ ಬಾಗಿಲಿನ ಚೌಕಟ್ಟುಗಳನ್ನು, ಬಾಗಿಲುಗಳನ್ನು ಎಲ್ಲಾ ತುಂಡು ಮಾಡಿದನು. ಕಿಟಕಿ ಬಾಗಿಲುಗಳ ಚೌಕಟ್ಟುಗಳನ್ನು ಮುರಿದು, ತಳಿಗಳನ್ನು ಮುರಿದು , ಎಲ್ಲವನ್ನೂ ಚಕ್ಕೆಮಾಡಿ ಚೀಲದ ತುಂಬಾ ತುಂಬಿ ಬ್ರಾಹ್ಮಣನಿಗೆ
ಧನ ಧಾನ್ಯ ಸಹಿತ ಕೊಟ್ಟನು. ಬ್ರಾಹ್ಮಣ ಸಂತೋಷದಿಂದ ಹೊರಟನು.

ಕೃಷ್ಣನು ಅರ್ಜುನನನ್ನು ನೋಡಿ, ಈಗ ಹೇಳು ಯಾರು ದಾನಿಗಳು ಅಂತ ಕೇಳಿದ. ಅರ್ಜುನನ್ನು ತುಟಿ ಪಿಟ್ ಅನ್ನಲ್ಲಿಲ್ಲ. ನೋಡು ಅರ್ಜುನ
“ಅವಕಾಶ ಸಿಕ್ಕಾಗ ಮಾಡುವುದು ಬೇರೆ, ಸಿಕ್ಕ ಅವಕಾಶದಲ್ಲಿ ಕೊಡುವುದು ಬೇರೆ” ಕರ್ಣನು ಅವನ ಬಂಗಾರದಂತಹ ದೇವರ ಕೊಣೆಯ ಬಾಗಿಲು ಕಿಟಕಿಗಳನ್ನು ಹಿಂದುಮುಂದು ನೋಡದೆ ಎಲ್ಲವನ್ನು ಮುರಿದು ಕೊಟ್ಟ. ನನ್ನ ಮನೆಯ ದೇವರ ಕೋಣೆ, ಎಷ್ಟೊಂದು ಸುಂದರವಾಗಿದೆ, ಹೇಗೆ ಕೊಡಲಿ
ಅಲ್ಲದೆ ಮನಸ್ಸಿನಲ್ಲಿ ಕೊಡಲೊ ಬೇಡವೋ,ಈಗಕೊಡಲೊ, ನಾಳೆಕೊಡಲೊ, ಇದರ ಬದಲಿಗೆ ಬೇರೆ ಏನಾದರೂ ಕೊಡಲೇ, ಇಂಥ ಗೊಂದಲಗಳು ಅವನಲ್ಲಿ ಒಂದು ಇರಲಿಲ್ಲ, ‘ ಕೇಳಲು ಬಂದವರಿಗೆ ಕೊಡಬೇಕಾದ್ದು ನನ್ನ ಧರ್ಮ ಎಂದು ಕರ್ಣ ತಿಳಿದಿದ್ದ’ ಹೀಗಾಗಿ ಅವನ ಮನಸ್ಸಿನಲ್ಲಿ ಗೊಂದಲಕ್ಕೆ ಅವಕಾಶವೇ ಇರಲಿಲ್ಲ. ನಿರ್ದಿಷ್ಟವಾದ ಮನಸ್ಸಿನಿಂದ ಕೈಯೆತ್ತಿ ಕೊಟ್ಟನು.ಧರ್ಮದ ಮೂಲವಿರುವುದು ಇಲ್ಲಿ ಎಂದನು ಕೃಷ್ಣ..

“ನಾನ್ಯಂ ಗುಣೇಭ್ಯಹ ಕರ್ತಾರಮ್, ಯದಾ ದ್ರಷ್ಟಾನುಪಶ್ಯತಿ,
ಗುಣಿಣೇಭ್ಯಶ್ಚ ಪರಂ ವೇತ್ತಿ, ಮಧ್ಭಾವಂ ಸೋಧಿಗಚ್ಛತಿ”!

(ಗುರುರಾಜ ಕರ್ಜಗಿ ಪ್ರವಚನದಲ್ಲಿ ಕೇಳಿದ್ದು)

Leave a Reply

Your email address will not be published. Required fields are marked *

Translate »