ಶ್ರೀರಾಮ ಪ್ರಾತಃ ಸ್ಮರಣ ಸ್ತೋತ್ರ ಭಾವಥ೯..!
ಪ್ರಾತಸ್ಮರಾಮಿ ರಘುನಾಥ ಮುಖಾರವಿಂದಂ l
ಮಂದಸ್ಮಿತಂ ಮಧುರಭಾಷಿ ವಿಶಾಲಭಾಲಂ ll
ಕರ್ಣಾವಲಂಬಿ ಚಲಕುಂಡಲ ಶೋಭಿಗಂಡಂ l
ಕರ್ಣಾಂತ ಧೀರ್ಘ ನಯನಂ ನಯಾಭಿರಾಮಂ ll1ll
ಭಾವಾರ್ಥ :- ಮಂದಹಾಸಭರಿತ ಸುಮಧುರವಾಗಿರುವ ನುಡಿ, ಅಗಲವಾಗಿರುವ ಹಣೆ, ಕಿವಿಗಳಲ್ಲಿ ತೂಗಾಡುತ್ತಿರುವ ಅಸ್ಥಿರವಾದ ಕುಂಡಲಗಳು, ಆ ಕುಂಡಲಗಳಿಂದ ಪ್ರಕಾಶಭರಿತವಾಗಿರುವ ಕಿವಿ ಹಾಗೆಯೇ ಮತ್ತು ಕೆನ್ನೆಗಳು ಚಾಚಿದ ವಿಶಾಲವಾದ ಕಣ್ಣುಗಳು, ಆ ಕಣುಗಳಿಂದ ಮನೋಹರವಾಗಿ ಕಂಗೊಳಿಸುತ್ತಿರುವ ಶ್ರೀರಾಮನ ಮುಖಕಮಲವನ್ನು ನಾನು ಉಷಃಕಾಲದಲ್ಲಿ ಸ್ಮರಿಸುವೆ.
ಪ್ರಾತರ್ಭಜಾಮಿ ರಘುನಾಥ ಕರಾರವಿಂದಂ l
ರಕ್ಷೋಗಣಾಯ ಭಯದಂ ವರದಂ ನಿಜೇಭ್ಯಃ ll
ಯದ್ ರಾಜಸಂಸದಿ ವಿಭಜ್ಯ ಮಹೇಷ ಚಾಪಂ l
ಸೀತಾಕರಗ್ರಹಣ ಮಂಗಲಮಾಪ ಸದ್ಯಃ ll2ll
ಭಾವಾರ್ಥ :-:ದಾನವರ ಸಮೂಹಕ್ಕೆ ಭೀತಿಯನ್ನು ಹುಟ್ಟಿಸಿದ, ತನ್ನ ಭಕ್ತರಿಗೆ ವರದಾಯಕನಾದ, ಜನಕರಾಜನ ಅರಮನೆಯ ಸಭೆಯಲ್ಲಿ ಶಿವಧನುಸ್ಸನ್ನು ಮುರಿದು ಸೀತಾದೇವಿಯ ಪಾಣಿಗ್ರಹಣದ ಶುಭಕಾರ್ಯವನ್ನು ಗೈದ ಆ ರಘುನಾಥನ ಕರಕಮಲವನ್ನು ನಾನು ಉಷಃಕಾಲದಲ್ಲಿ ಭಜಿಸುವೆ.
ಪ್ರಾತರ್ಭಜಾಮಿ ರಘುನಾಥ ಪದಾರವಿಂದಂ l
ಪದ್ಮಾಂಕುಶಾದಿ ಶುಭರೇಖ ಸುಖಾವಹಂ ಮೇ ll
ಯೋಗೀಂದ್ರ ಮಾನಸ ಮಧುವ್ರತ ಸೇವ್ಯಮಾನಂ l
ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾಃ ll3ll
ಭಾವಾರ್ಥ – ಕಮಲ, ಅಂಕುಶ ಇತ್ಯಾದಿ ಶುಭರೇಖೆಯುಳ್ಳವನಾದ, ನನ್ನ ಆನಂದಕ್ಕೆ ಕಾರಣನಾಗುವ, ಶ್ರೇಷ್ಟರುಗಳಾದ ಮಹರ್ಷಿಗಳ ಮನಸ್ಸೆಂಬ ಭ್ರಮರಗಳಿಂದ ಸೇವಿಸಲ್ಪಡುವ, ಗೌತಮ ಮಹರ್ಷಿಯ ಧರ್ಮಪತ್ನಿ ಅಹಲ್ಯೆಯ ಶಾಪವನ್ನು ಪರಿಹರಿಸಿ ಉದ್ಧರಿಸಿದ ಶ್ರೀರಾಮನ ಚರಣಾರವಿಂದಗಳನ್ನು ನಾನು ಉಷಃಕಾಲದಲ್ಲಿ ಭಜಿಸುವೆ.
ಪ್ರಾತರ್ವದಾಮಿ ವಚಸಾ ರಘುನಾಥ ನಾಮಂ l
ವಾಗ್ದೋಷಷಹಾರಿ ಸಕಲಂ ಶಮಲಂ ನಿಹಂತಿ ll
ಯತ್ ಪಾರ್ವತೀ ಸ್ವ ಪತಿನಾ ಸಹ ಭೋಕ್ಕು ಕಾಮಾ l
ಪ್ರೀತ್ಯಾ ಸಹಸ್ರ ಹರಿನಾಮ ಸಮಂ ಜಜಾಪ ll4ll
ಭಾವಾರ್ಥ :- ಸಮಸ್ತ ವಾಗ್ದೋಷಗಳನ್ನು ಪರಿಹರಿಸುವ, ಸರ್ವ ಪಾಪಗಳನ್ನು ಹೋಗಲಾಡಿಸುವ, ” ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೇ ” ಎಂಬ ವಿಷ್ಣು ಸಹಸ್ರ ನಾಮಕ್ಕೆ ಸರಿ ಸಮವಾದ ಯಾವ ಸ್ತುತಿಯ ರಸಾಸ್ವಾದನೆಯನ್ನು ಮಾಡಬಯಸುತ್ತಾ ತನ್ನ ಪತಿಯೊಡನೆ ಪಾರ್ವತೀ ದೇವಿಯು ಪ್ರೀತಿಯಿಂದ ಜಪಿಸುವಳೋ ಅಂತಹಾ ಪಾವನನಾಮ ಶ್ರೀರಾಮನಾಮವನ್ನು ಆನುದಿನವೂ ಉಷಃಕಾಲದಲ್ಲಿ, ನಾನು ಜಪಿಸುವೆ.
ಪ್ರಾತಃಶ್ರಯೇ ಶ್ರುತಿನುತಾಂ ರಘುನಾಥ ಮೂರ್ತಿಂ l
ನೀಲಾಂಬುದೋತ್ಪಲ ಸಿತೇತರ ರತ್ನ ನೀಲಾಂ ll
ಆಮುಕ್ತ ಮೌಕ್ತಿಕ ವಿಶೇಷ ವಿಭೂಷಣಾಡ್ಯಾಂ l
ದ್ಯೇಯಾಂ ಸಮಸ್ತ ಮುನಿಭಿರ್ಜನ ಮುಕ್ತಿ ಹೇತುಂ ll5ll
ಭಾವಾರ್ಥ – ನೀಲಮುಗಿಲನಂತೆ, ನೀಲಕಮಲದಂತೆ, ಹಾಗೂ ಇಂದ್ರನೀಲಮಣಿಯಂತೆ ನೀಲವರ್ಣದ ಶರೀರವನ್ನು ಹೊಂದಿದ, ವಿಶೇಷವಾಗಿರುವ ಮುತ್ತಿನಹಾರಗಳನ್ನು ಧರಿಸಿ ಶೋಭಿಸುತ್ತಿರುವ, ಸಮಸ್ತ ಋಷಿ ಸಮೂಹದಿಂದ ಧ್ಯಾನಿಸಲ್ಪಡುವ, ಭಕ್ತಜನರಿಗೆ ಮೋಕ್ಷದೊರಕಲು ಕಾರಣೀಭೂತನಾದ, ವೇದಗಳಲ್ಲಿ ಸ್ತುತಿಸಲ್ಪಡುತ್ತಿರುವ ಆ ಶ್ರೀರಾಮನ ದಿವ್ಯಮೂರ್ತಿಗೆ ಉಷಃಕಾಲದಲ್ಲಿ ನಾನು ಶರಣಾಗುವೆ.
ಯಃ ಶ್ಲೋಕ ಪಂಚಕಮಿದಂ ಪ್ರಯತಃ ಅಠೇದ್ಧಿ – ನಿತ್ಯಂ ಪ್ರಭಾತ ಸಮಯೇ ಪುರುಷಃ ಪ್ರಬುದ್ಧ | ಶ್ರೀರಾಮಕಿಂಕರ ಜನೇಷು ಸ ಏವ ಮುಖ್ಯೋ । ಭೂತ್ವಾ ಪ್ರಯಾತಿ ಹರಿಲೋಕಮನ್ಯ ಲಭ್ಯಂ ॥6॥
ಭಾವಾರ್ಥ : ಯಾವಾತನು ಪ್ರಯತ್ನ ಪೂರ್ವಕವಾಗಿ ಈ ಐದು ಶ್ಲೋಕಗಳನ್ನು ಅನುದಿನವೂ ನಿಯಮಿತವಾಗಿ ಶ್ರದ್ಧೆಯಿಂದ ಪಠಿಸುವನೋ ಅಂತಹವನು ಶ್ರೀರಾಮನ ಊಳಿಗದವರಲ್ಲಿ ಪ್ರಾಮುಖ್ಯವಾಗಿ ಅನ್ಯರಿಗೆ ಲಭಿಸಲಸಾಧ್ಯವಿರುವ ವಿಷ್ಣು ಲೋಕವನ್ನು ಹೊಂದುವನು.
ಜೈ ಶ್ರೀ ರಾಮ್ 🙏
ಡಿ.